ಮೋಡ -
ವಾಯುವಿನಲ್ಲಿ ತೇಲುತ್ತಿರುವ ನೀರ ಬಿಂದುಕಗಳ (ಡ್ರಾಪ್‍ಲೆಟ್ಸ್) ಇಲ್ಲವೆ ಬರ್ಫಕಣಗಳ ಸಮುಚ್ಚಯ (ಕ್ಲೌಡ್), ಇದರಲ್ಲಿ ಉಷ್ಣತಾನುಸಾರ ಬಿಂದುಕಗಳು ಮಾತ್ರ ಇರಬಹುದು. ಬರ್ಫಕಣಗಳೂ ಬೆರೆತಿರಬಹುದು. ಬರ್ಫ ಬಿಂದುವಿಗಿಂತ (0(ಅ) ಕೆಳಗಿನ ಉಷ್ಣತೆಗಳಲ್ಲಿಯೂ ಈ ಮಿಶ್ರಣ ಇರುವುದು ಸಾಧ್ಯ. ಮೋಡದಲ್ಲಿಯ ನೀರಹನಿಗಳೆಲ್ಲವೂ ಘನೀಭವಿಸುವ ವಾಸ್ತವಉಷ್ಣತೆ-40(ಅ. ಉಷ್ಣತೆ ಇಬ್ಬನಿಬಿಂದು (ಡ್ಯೂ ಪಾಯಿಂಟ್) ತಲುಪಿದಾಗ ಅಥವಾ ನಿರ್ದಿಷ್ಟ ಸಂಮರ್ದದಲ್ಲಿರುವ ವಾಯು ಆ ಉಷ್ಣತೆಯಲ್ಲಿ ಸಾಧ್ಯವಾಗುವಷ್ಟೂ ತೇವವನ್ನು ಒಳಗೊಂಡಾಗ ಮೋಡ ರೂಪುಗೊಳ್ಳುತ್ತದೆ. ಭೂತಲದ ಮೇಲೆ ಇದು ಸಂಭವಿಸಿದಾಗ ಕಾವಳ (ಫಾಗ್) ಕವಿಯುತ್ತದೆ; ವಾಯುಮಂಡಲದಲ್ಲಿ ಸಂಭವಿಸಿದಾಗ ಮೋಡ ಮೈದಳೆಯುತ್ತದೆ. ಮೋಡದ ಬಿಂದುಕಗಳು ರೂಪುಗೊಳ್ಳಲು ವಾಯುವಿನಲ್ಲಿ ಸಂಘನನ ಬೀಜಕೇಂದ್ರಗಳೆಂಬ ಸೂಕ್ಷ್ಮದರ್ಶಕೀಯ ಕಣಗಳಿರಬೇಕು. ಇವು ಸಾಧಾರಣವಾಗಿ ದೂಳು, ಹೊಗೆ ಮತ್ತು ಕಡಲಿನಿಂದ ಎರಚಲ್ಪಟ್ಟ ಲವಣಕಣಗಳು. ಉಷ್ಣತೆ ಇಬ್ಬನಿಬಿಂದು ಐದಿದಾಗ ಮೋಡ ಮೈದಳೆಯಲು ಬೇಕಾಗುವಷ್ಟು ಸಂಘನನ ಬೀಜಕೇಂದ್ರಗಳು ವಾಯುಮಂಡಲದಲ್ಲಿರುವುವು. ಮೋಡದಲ್ಲಿಯ ನೀರಬಿಂದುಕದ ಸರಾಸರಿವ್ಯಾಸ 0.00254 ಸೆಂಮೀ. ಈ ನೀರಿನ ತೂಕ ಘನಮೀಟರಿಗೆ 0.1 ರಿಂದ 0.5 ಗ್ರಾಮ್. ಆದರೂ ಮೋಡಗಳು ಅದೆಷ್ಟು ತೆಳು ಮತ್ತು ವಿರಳ ಎಂದರೆ ಸುಮಾರು 3.2ಕಿಮೀ ದಪ್ಪದ ಮತ್ತು ಘನಮೀಟರಿಗೆ 1 ಗ್ರಾಮ್ ನೀರು ಸೇರಿರುವ ಮೋಡವೇನಾದರೂ ಪೂರ್ತಿ ದ್ರವಿಸಿ ಸುರಿದರೆ ಅದು ಕೇವಲ 2.54 ಮಿಮೀ ಮಳೆಗೆ ಕಾರಣವಾದೀತು ಅಷ್ಟೆ.

		ಸರಾಸರಿ ಎತ್ತರ ಮತ್ತು ಬೆಳೆವಣಿಗೆ ಅನುಸಾರ ಮೋಡಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಿದೆ:

		(1) ಉನ್ನತ ಮೋಡಗಳು: ಸರಾಸರಿ ಮೇಲುಮಟ್ಟ 12 ಕಿಮೀ. ಸರಾಸರಿ ಕೆಳಮಟ್ಟ 7 ಕಿಮೀ.

		(2) ಮಧ್ಯಮ ಮೋಡಗಳು: ಸರಾಸರಿ ಮೇಲುಮಟ್ಟ 7 ಕಿಮೀ. ಸರಾಸರಿ ಕೆಳಮಟ್ಟ 3 ಕಿಮೀ.

		(3) ನಿಮ್ನ ಮೋಡಗಳು: ಸರಾಸರಿ ಮೇಲುಮಟ್ಟ 4 ಕಿಮೀ. ಸರಾಸರಿ ಕೆಳಮಟ್ಟ ನೆಲಕ್ಕೆ ಹತ್ತಿರ.

		(4) ಊಧ್ರ್ವಾಭಿವರ್ಧನೆಸಹಿತವಾದ ಮೋಡಗಳು: ಸರಾಸರಿ ಮೇಲುಮಟ್ಟ ಬದಲಾಗುತ್ತಿರುವುದು 12 ಕಿಮೀ ವರೆಗೂ ಹೋಗಬಹುದು; ಸರಾಸರಿ ಕೆಳಮಟ್ಟ 0.5 ಕಿಮೀ.

	ಸಾಧಾರಣವಾಗಿ ಉಷ್ಣವಲಯದ ಅಕ್ಷಾಂಶಗಳನ್ನು ಮತ್ತು ಮಟ್ಟಸನೆಲಗಳನ್ನು ಕುರಿತಂತೆ ಈ ಎತ್ತರಗಳು ಇವೆ. ಗಿರಿ ಶ್ರೇಣಿಗಳಿರುವ ವಲಯಗಳಲ್ಲಿ ನೆಲದ ಮೇಲಿನ ಎತ್ತರಗಳು ಸಾಧಾರಣವಾಗಿ ಮೇಲೆ ಬರೆದಿರುವ ಮಿತಿಗಳಿಗಿಂತ ಕಡಿಮೆ ಇರುತ್ತವೆ. ನಿಮ್ನ ಮೋಡಗಳು ಅನೇಕ ಸಂದರ್ಭಗಳಲ್ಲಿ ಗಿರಿಶೃಂಗವನ್ನು ಮುಸುಕಿರುವುದೂ ಉಂಟು. 

	ಮೋಡಗಳಿಗೆ ಅವುಗಳ ಆಕಾರವನ್ನು ಗಮನಿಸಿ ವಿವರಣಾತ್ಮಕ ಹೆಸರುಗಳನ್ನು ನೀಡಿರುವುದುಂಟು. ಲ್ಯೂಕ್ ಹೊವಾರ್ಡ್ ಎಂಬಾತ 1803ರಲ್ಲಿ ಮಾಡಿದ ವರ್ಗೀಕರಣಾನುಸಾರ ಈ ಹೆಸರುಗಳಿವೆ: 

		(1) ಸ್ಟ್ರ್ಯಾಟಸ್: ನಿರ್ದಿಷ್ಟ ಆಕಾರವಿಲ್ಲದ ಹಾಳೆ ಮೋಡ.

		(2) ಕ್ಯುಮ್ಯುಲಸ್: ಸಾಧಾರಣವಾಗಿ ಮಟ್ಟಸತಳ ಗುಂಬಜ ಆಕಾರ ಮತ್ತು ಶಿಖರದಲ್ಲಿ ದುಂಡಗಿನ ಹೊರಚಾಚುಗಳು 
 ಇರುವ ಮೋಡ.

		(3) ಸಿರಸ್: ಸೂಕ್ಷ್ಮ ತಂತುಕಗಳಿಂದ ಕೂಡಿರುವ, ಸಾಧಾರಣವಾಗಿ ಬಿಳಿಬಣ್ಣದ ಮತ್ತು ಬಹುತೇಕ ರೇಷ್ಮೆಯ 
 ಹಾಸಿನಂತಿರುವ ಮೋಡ, ದಟ್ಟ ಛಾಯೆ ಏನೂ ಇರುವುದಿಲ್ಲ.

	ಮೋಡಗಳ ಗಾತ್ರ ಹಾಗೂ ಆಕಾರಗಳಲ್ಲಿ ಅನಂತವೈವಿಧ್ಯ ಇದ್ದರೂ ಅವನ್ನು ಹತ್ತು ಮೂಲ ಬಗೆಗಳಾಗಿ ವರ್ಗಿಕರಿಸುವುದು ಸಾಧ್ಯವಿದೆ. ಚಾಲ್ತಿಯಲ್ಲಿರುವ ಅಂತಾರಾಷ್ಟ್ರೀಯ ವರ್ಗೀಕರಣಗಳಿವು:

	1 ಸಿರಸ್: ಎತ್ತರ 9-12 ಕಿಮೀ. ಛಾಯೆ ಇಲ್ಲ. ಸೂಕ್ಷ್ಮ ತಂತುಕಗಳಿಂದಾಗಿದ್ದು ಸಾಧಾರಣವಾಗಿ ಬಿಳಿ ಬಣ್ಣ ತಳೆದಿರುತ್ತವೆ. ರೇಷ್ಮೆ ಅಥವಾ ಗರಿಯಂತೆ ಮೃದು. ಸಿರಸ್ ಮೋಡಗಳು ಪೆಟ್ಟಿಗಳಲ್ಲಿ ಅಳವಟ್ಟಿರುತ್ತವೆ.

	2 ಸಿರೊಸ್ಟ್ರ್ಯಾಟಸ್: ಎತ್ತರ 7-10 ಕಿಮೀ. ಬಿಳಿ ಬಣ್ಣದ ತೆಳು ಮೋಡಗಳ ಅವಕುಂಠನ ಮಾದರಿಯ ಲೇಪಗಳು. ಸೂರ್ಯ ಅಥವಾ ಚಂದ್ರಬಿಂಬಗಳ ಅಂಚುಗಳನ್ನು ಕೂಡ ಮಸಕು ಮಾಡಲಾರವು. ಹೆಚ್ಚಿನ ಸಂದರ್ಭಗಳಲ್ಲಿ ಪ್ರಭಾವಲಯಗಳಿಗೆ ಕಾರಣವಾಗುತ್ತದೆ. ಇಂಥ ಮೋಡಗಳು ಇಡೀ ಆಕಾಶವನ್ನೇ ಆವರಿಸಿದ್ದು ಅದಕ್ಕೆ ಹಾಲುಸವರಿದ ರೂಪ ಕೊಡುತ್ತದೆ. ಆಗ ಇದಕ್ಕೆ ಸಿರಸ್ ಮಬ್ಬು ಎಂದು ಹೆಸರು. 

	3 ಸಿರೊಕ್ಯುಮ್ಯುಲಸ್: ಎತ್ತರ 7-10 ಕಿಮೀ. ಅರ್ಧಪಾರದರ್ಶಕ ಮೋಡಗಳ ಚಿಕ್ಕ ಗೋಳರಾಶಿಗಳು. ಛಾಯೆ ಇಲ್ಲ. ಸೂರ್ಯ ಪ್ರಕಾಶ ಬಿದ್ದಾಗ ಪ್ರಜ್ಜ್ವಲಿಸುತ್ತವೆ. ಕಡಲಕಿನಾರೆಯಲ್ಲಿ ಮರಳರಾಶಿಯ ಮೇಲೆ ಕಂಡುಬರುವ ಏಣುಗಳಂತೆ ವಿನ್ಯಾಸವಿದೆ.

	4 ಆಲ್ಟೊಕ್ಯುಮ್ಯುಲಸ್: ಎತ್ತರ 4-5 ಕಿಮೀ. ಎಳು ಹಾಳೆಗಳಂಥ ರಚನೆಗಳಿಂದಾಗಿದೆ. ಚಪ್ಪಟೆ ಗೋಳಗುಚ್ಛಗಳ ಸಮುದಾಯದಂತೆ ತೋರುತ್ತದೆ. ಅತ್ಯಂತ ಕಿರಿಯ ಘಟಕಗಳ ದೃಗ್ಗೋಚರ ಅಗಲ 1(-5(.

	5 ಆಲ್ಟೊಸ್ಟ್ರ್ಯಾಟಸ್: ಎತ್ತರ 3-3 ಕಿಮಿ. ಪಟ್ಟಿ ಅಥವಾ ತಂತಿ ತಂತಿ ಆಗಿರುವ ಮುಸುಕು ಮೋಡ. ಬೂದಿಬಣ್ಣ, ದಪ್ಪ ಸಿರೊಸ್ಟ್ರ್ಯಾಟಸಿನಂತೆ ಇದ್ದರೂ ಪ್ರಭಾವಲಯಗಳಿಲ್ಲ. ಈ ಮೋಡದ ಮೂಲಕ ಸೂರ್ಯ ಅಥವಾ ಚಂದ್ರನ ಮಸಕುಬಿಂಬ ಪ್ರಕಟ ಆಗುತ್ತದೆ.

	6 ನಿಂಬೊಸ್ಟ್ರ್ಯಾಟಸ್: ಎತ್ತರ 0.2-3 ಕಿಮೀ. ಕಡು ಬೂದಿಬಣ್ಣದ ರಚನಾ ರಹಿತ ಮೋಡ. ಮೋಡ ಹೆಚ್ಚು ಕಡಿಮೆ ಏಕರೀತಿ ಹಬ್ಬಿರುವುದು ತೀರ ದುರ್ಬಲವಾಗಿ ಬೆಳಗುತ್ತಿರುವುದು-ಒಳಗೊಂದು ಕಂದೀಲು ಉರಿಯುತ್ತಿದೆಯೋ ಎಂಬಂತೆ. ಅನೇಕ ಸಂದರ್ಭಗಳಲ್ಲಿ ಈ ಮೋಡ ಇದರ ಅದೇ ಮೇಲಿನ ಆಲ್ಟೊಸ್ಟ್ರ್ಯಾಟಸ್ ಜೊತೆ ವಿಲೀನವಾಗಬಹುದು ಅಥವಾ ಆಗದೆ ಇರಬಹುದು.

	7 ಸ್ಟ್ರ್ಯಾಟೊಕ್ಯುಮ್ಯುಲಸ್: ಎತ್ತರ 1-4 ಕಿಮೀ. ಗೋಳರಾಶಿಗಳಿಂದ ಇಲ್ಲವೇ ತೆಳು ಹಾಸುಗಳಿಂದ ಆಗಿರುವ ಪದರ ಅಥವಾ ಮಚ್ಚೆಗಳು ಇವು ಮೃದುವಾಗಿರುವುವು. ಬೂದು ಬಣ್ಣ.

	8 ಸ್ಟ್ರ್ಯಾಟಸ್: ಎತ್ತರ 0-0.8 ಕಿಮೀ. ಕಾವಳವನ್ನು ಹೋಲುವ ಮತ್ತು ತೀರ ಕೆಳಮಟ್ಟದಲ್ಲಿರುವ ಮೋಡ. ಆದರೆ ನೆಲದ ಮೇಲೆ ನೆಲಸಿರುವುದಿಲ್ಲ.

	9 ಕ್ಯುಮ್ಯುಲಸ್: ಬುಡದ ಎತ್ತರ 1-3 ಕಿಮೀ. ಇವುಗಳ ಕೊಡಿಗಳು ಬುಡಗಳಿಗಿಂತ 2-3 ಕಿಮೀ ಎತ್ತರದಲ್ಲಿರುತ್ತವೆ. ದಟ್ಟ ಮೋಡಗಳಿವು. ಊಧ್ರ್ವವಾಗಿ ಚಾಚಿರುವುವು. ಸೂರ್ಯನ ಸ್ಥಾನವನ್ನು ಅವಲಂಬಿಸಿ ಇವು ಅತ್ಯುಜ್ಜ್ವಲ ಬಿಳುಪಾಗಿರುತ್ತದೆ ಅಥವಾ ಕಪ್ಪಾಗಿ ಅಂಚುಗಳಲ್ಲಿ ಬೆಳ್ಳಿ ರೇಖೆಗಳನ್ನು ಹೊಂದಿರುತ್ತದೆ.

	10 ಕ್ಯುಮ್ಯುಲೋನಿಂಬಸ್: ಬುಡದ ಎತ್ತರ 0.5-2.5 ಕಿಮೀ. ಈ ಮೋಡಗಳ ಕೊಡಿಗಳು ಬುಡಗಳಿಗಿಂತ 7 ಕಿಮೀ ಎತ್ತರಕ್ಕೆ ಚಾಚಿರುತ್ತದೆ. ಕಮ್ಮಾರನ ಬಡಿಗಲ್ಲಿನ ಆಕಾರ. ಬುಡಗಳು ನಿರ್ದಿಷ್ಟ ಆಕಾರವಿಲ್ಲದೆ ನಿಮ್ನಮಟ್ಟದ ನಿಂಬೊ ಸ್ಟ್ರ್ಯಾಟಸ್‍ನಂತಿರುವುವು. ಇಲ್ಲಿಂದ ಮಳೆ ಸುರಿಯುತ್ತದೆ. ಮಿಂಚು ಗುಡುಗು ಸಹಿತ ಆಲಿಕಲ್ಲು ಬೀಳಬಹುದು.

	ಮೂರು ಮುಖ್ಯ ರೀತಿಗಳಲ್ಲಿ ವಾಯುಶೀತಲನಗೊಂಡು ಮೋಡಗಳು ಮೈದಳೆಯುವುದು ಸಾಧ್ಯ. ಊಧ್ರ್ವ ನಯನ (ವರ್ಟಿಕಲ್ ಕನ್ವೆಕ್ಷನ್), ಮೇಲ್ಮುಖ ಚಲನೆ ಮತ್ತು ಸಂಸ್ಪರ್ಶ ಶೀತಲನ (ತಣ್ಪು ಪರಿಸರದ ಜೊತೆ ಸಂಪರ್ಕ). ಭೂತಲದಲ್ಲಿ ವಾಯು ಬಿಸಿಯಾದಾಗ ಊಧ್ರ್ವನಯನ ಚಲನೆ ಆರಂಭವಾಗುತ್ತದೆ. ಒಳಬೀಸುತ್ತಿರುವ ಗಾಳಿ ಅಸ್ಥಿರಸ್ಥಿತಿಯಲ್ಲಿರುವ ವಾಯುವನ್ನು ಮೇಲಕ್ಕೆ ಎತ್ತುವಾಗಲೂ ಇದು ಸಂಭವಿಸುತ್ತದೆ. ಆಲ್ಟೊಕ್ಯುಮ್ಯುಲಸ್, ಕ್ಯುಮ್ಯುಲಸ್ ಮತ್ತು ಕ್ಯುಮ್ಯುಲೋನಿಂಬಸ್ ಮೋಡಗಳು ಈ ತೆರನಾಗಿ ಉಂಟಾಗುತ್ತದೆ. ತೀರ ಉದ್ದವಾದ ಚಡಾವಿನ ಮೂಲಕ ವಾಯು ಮೇಲೇರಿದಾಗ ವ್ಯಾಕೋಚನ ಶೀತಲನದ (ಎಕ್ಸ್‍ಪ್ಯಾನ್ಷನಲ್ ಕೂಲಿಂಗ್) ಕಾರಣವಾಗಿ ಅದರ ಉಷ್ಣತೆ ಕುಸಿದು ಅದರಲ್ಲಿಯ ತೇವ ಸಂಘನಿಸಿ ಮೋಡಗಳು ಮೈದಳೆಯುತ್ತದೆ. ಸ್ಟ್ರ್ಯಾಟಸ್, ಆಲ್ಟೊಸ್ಟ್ರ್ಯಾಟಸ್ ಮತ್ತು ನಿಂಬೊಸ್ಟ್ರ್ಯಾಟಸ್ ಮೋಡಗಳು ಈ ತೆರನಾಗಿ ಉಂಟಾಗುತ್ತದೆ. ತೇವಭರಿತವಾದ ಬಿಸಿಗಾಳಿ ತಣ್ಣಗಿನ ಪ್ರದೇಶದ ಮೇಲೆ ಹರಿದಾಗ ಅದರಲ್ಲಿಯ ತೇವ ಸಂಘನಿಸಲ್ಪಡುವುದು. ಆಗ ಸ್ಟ್ರ್ಯಾಟಸ್ ಅಥವಾ ಕಾವಳ ರೂಪುಗೊಳ್ಳುತ್ತದೆ. ಈ ತೆರನಾದ ಮೋಡಗಳು ತೀರ ತೆಟ್ಟೆಯಾಗಿದ್ದು ನೆಲದ ಮೇಲೆ ವ್ಯಾಪಕವಾಗಿ ಹರಡಿರುತ್ತದೆ.
(ಡಿ.ಕೆಆರ್‍ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ